ಪದ್ಮರಾಗ
	ಸೊಗಸಾದ ಊದಾ  ಅಥವಾ ನೇರಿಳೆ ಬಣ್ಣವುಳ್ಳ ಕ್ವಾಟ್ರ್ಸ್ ಅಥವಾ ಬೆಣಚುಕಲ್ಲು (ಆ್ಯಮಿತಿಸ್ಟ್).  ಇದು ಸಾಮಾನ್ಯವಾಗಿ  ಷಷ್ಠಕ ವರ್ಗದ ಹರಳುಗಳಾಗಿ ಪ್ರಕೃತಿಯಲ್ಲಿ ಸಿಗುತ್ತದೆ. ಗಾಜಿನಂತೆ ಹೊಳೆಯುತ್ತದೆ.  ಕಾಠಿಣ್ಯಾಂಕ 7. ಬಣ್ಣ ಒಂದೇ ಸಮವಾಗಿ ಖನಿಜದಲ್ಲಿ ಹರಡಿರದು.  ಹಲವು ಅಚ್ಚ ಊದಾ ಬಣ್ಣದವಾಗಿಯೂ ಇನ್ನೂ ಕೆಲವು ತಿಳೀನೇರಿಳೆ ಬಣ್ಣದವಾಗಿಯೂ ಇವೆ.  ಒಂದೆ ಹರಳಿನಲ್ಲಿ ಬಣ್ಣ ಬಗೆ ಬಗೆಯಾಗಿ ಹರಡಿರಲೂಬಹುದು. ಖನಿಜದಲ್ಲಿ ಕಶ್ಮಲರೂಪದಲ್ಲಿರುವ ಅತ್ಯಲ್ಪ ಮೊತ್ತದ ಮ್ಯಾಂಗನೀಸ್ ಅಥವಾ ಕಬ್ಬಿಣದ ಆಕ್ಸೈಡುಗಳಿಂದ ಈ ಬಣ್ಣ ಉಂಟಾಗಿರಬಹುದೆಂದು ಭಾವಿಸಲಾಗಿದೆ. ಖನಿಜವನ್ನು ಯುಕ್ತ ರೀತಿಯಲ್ಲಿ ಉಷ್ಣಕ್ಕೆ ಒಡ್ಡಿ ಬಣ್ಣವನ್ನು ಉತ್ತಮಗೊಳಿಸಬಹುದು.  ಹಾಗೆ ಮಾಡಿದಾಗ ಸಾಮಾನ್ಯವಾಗಿ ಊದಾ ಬಣ್ಣ ಹಳದಿಯಾಗಿ ಮಾರ್ಪಡುತ್ತದೆ.  ಕೆಂಪು ಅಥವಾ ಊದಾ ಬಣ್ಣದ ಪದ್ಮರಾಗವನ್ನು ಸೈಬೀರಿಯನ್ ಆಮೆತಿಸ್ಟ್ ಎಂದು ರತ್ನವ್ಯಾಪಾರಿಗಳು ಕರೆಯುತ್ತಾರೆ.  ಇದನ್ನು ಬಹು ಅಮೂಲ್ಯವಾದ ರತ್ನವೆಂದು ಪರಿಗಣಿಸಲಾಗಿದೆ.  ಪದ್ಮರಾಗ ಅಗ್ನಿಶಿಲೆಗಳ ಬಿರುಕುಗಳಲ್ಲಿ ಮತ್ತು ಸೀಳುಗಳಲ್ಲಿ  ದೊರೆಯುತ್ತದೆ.  ಮುಖ್ಯವಾಗಿ ಬ್ರಜಿಲ್, ಸೈಬೀರಿಯ, ಶ್ರೀಲಂಕಾ, ಭಾರತ, ಮಡಗಾಸ್ಕರ್ ಮತ್ತು ಅಮೆರಿಕದ ಲೇಕ್ ಸುಪೀರಿಯರ್ ಪ್ರದೇಶಗಳಲ್ಲಿ ಇದು ಬಲುಮಟ್ಟಿಗೆ ಸಿಗುತ್ತದೆ.
(ಎಸ್.ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ